Tuesday, 20 September 2011

ಹೀಗೊಂದು ಪ್ರೇಮ ಕಥೆ

from google image search:-)from google image search:-)


    ಜಿಟಿ ಜಿಟಿ ಸದ್ದಿನೊಂದಿಗೆ ಮುಂಗಾರು ಆಗ ತಾನೆ ಆರಂಭವಾಗಿತ್ತು. ಬೆಳಿಗ್ಗೆಯ ಕಾಫಿ ಕುಡಿದು ಪೇಪರ್ ಮೇಲೆ ಕಣ್ಣಾಡಿಸುವಾಗ ಸಪ್ಲಿಮೆಂಟರಿ ಪೇಪರ್ ನ ಮುಂಗಾರು ಮತ್ತು ಪ್ರೀತಿ ಎಂಬ ತಲೆ ಬರಹದಡಿಯಲ್ಲಿನ ಕವನ ನನ್ನ ಗಮನ ಸೆಳೆಯಿತು. ಮುಂಗಾರಿನ ಮಳೆ ಹನಿಯ ನಿನಾದದೊಂದಿಗೆ, ತುಂತುರು ಹನಿಗಳ ತುಂಟಾಟಗಳೊಂದಿಗೆ, ಬರಡು ಭೂಮಿಯಲ್ಲಿ ಮೊಳಕೆಯೊಡೆಯುವ ಹಸಿರೆಲೆಯಂತೆ ಒಂಟಿ ಬಾಳಲ್ಲಿ, ಬರಿದಾದ ಮನಸಲ್ಲಿ ತಂಗಾಳಿ ತರುತ್ತದೆ, ಈ ಪ್ರೀತಿ. ನನಗೂ ನನ್ನ ಪ್ರೀತಿ ಸಿಕ್ಕಿದ್ದು, ಇಂತಹದ್ದೇ ಒಂದು ಮುಂಗಾರಿನ ಮಳೆಯಲ್ಲೇ ಅಲ್ವಾ?
                  ಆವತ್ತು ನನ್ನ ಪೋಸ್ಟ್ ಗ್ರಾಜುವೇಶನ್ ಡಿಗ್ರಿಯ ಮೆರಿಟ್ ಸೀಟ್ ಖಾತರಿ ಪಡಿಸಿಕೊಂಡು ಧಾರವಾಡದಿಂದ ನನ್ನೂರಾದ ಕಾರವಾರಕ್ಕೆ ಬರಲು ಬಸ್ ಸ್ಟಾಪ್ ನಲ್ಲಿ ಕಾಯುತ್ತಿರುವಾಗ ನನ್ನವಳ ನೋಡಿದ್ದು ಪ್ರೀತಿ ಆಗಿದ್ದು, ಆಶ್ಚರ್ಯವಾಗುತ್ತಿರಬೇಕಲ್ಲವೇ? ಆದರೆ ಇದು ನಿಜ. "ಲವ್ ಅಟ್ ಫಸ್ಟ್ ಸೈಟ್" ಎನ್ನುವ ಮಾತು ಆವತ್ತು ನಿಜ ಅನಿಸಿತು. ಸ್ನಿಗ್ದ ಚೆಲುವ ಸಿರಿ, ತಿಡಿದ ಹುಬ್ಬು, ಲಿಪ್ ಸ್ಟಿಕ್ ನ ಲೇಪನವಿಲ್ಲದೆಯೇ ಮಿಂಚುತಿರುವ ತುಟಿಗಳು, ಕಾಡಿಗೆ ಹಚ್ಚಿದ ಮೀನು ಕಣ್ಣುಗಳು, ನೀಳ ಕೇಶರಾಶಿ, ಕತ್ತರಿಸಿದ ಮುಂಗುರುಳು ಅವಳ ಕೆನ್ನೆಯನ್ನು ಮುತ್ತಿಡುತಿತ್ತು. ನಾನು ಮಂತ್ರ ಮುಗ್ದನಾಗಿದ್ದೆ. 
 
                    ಆದರೆ ಅವಳನ್ನು ಎಲ್ಲೋ ನೋಡಿದ ನೆನಪು:-) :-) ;-) ನೆನಪಾಗುತ್ತಿಲ್ಲ. ಅವಳನ್ನೇ ನೋಡುತ ನಿಂತೆ, ಇಲ್ಲ ನೆನಪಗುತ್ತಿಲ್ಲಾ.. ಅರೆ ಅವಳು ನನ್ನೇ ನೋಡಿ ನಗುತ್ತಿದ್ದಾಳೆ. ನನ್ನ ಕಡೆಗೆ ಬರ್ತಿದ್ದಾಳೆ ನನ್ನೆದೆ ನಗಾರಿ ಜೋರಾಗಿ ಬಡಿಯಲಾರಂಬಿಸಿತು. ಅದಕ್ಕೆ ಸಾತ್ ನೀಡುವಂತೆ ಜೋರಾಗಿ ಮಳೆ ಬೇರೆ, ಅವಳನ್ನು ಎದುರಿಸುವ ದೈರ್ಯ ಇಲ್ಲದಾಯಿತು. ಮುಖ ಬೇರೆಡೆಗೆ ತಿರುಗಿಸಿದೆ. ನನ್ನೆದುರಿಗೆ ಬಂದು ಹಾಯ್ ಎಂದಳು. ನಾನು ಸೌಮ್ಯ, ಸೌಮ್ಯವಾಗೆಂದಳು. ಸಾರೀ ಯಾರೆಂದು ಗೊತ್ತಾಗಲಿಲ್ಲ ಎಂದೆ. 'ಏ ಅನಿ ಇಷ್ಟು ಬೇಗ ನನ್ನ ಮರೆತು ಬಿಟ್ಯಾ? ನಾನ್ ಕಣೋ ಸೋನು ಅದೇ ನಿನ್ನ ನಾಗವೇಣತ್ತೆಯ ಮಗಳು' ಎಂದಳು. 
 
                    ನನಗೆ ಸ್ವರ್ಗಕ್ಕೆ ಮೂರೇ ಗೇಣು. ನನ್ನ ಸೋನು ನನ್ನ ಬಾಲ್ಯದ ಸ್ನೇಹಿತೆ ಸೋನು.. ಬಾಲ್ಯವನ್ನು ನನ್ನೊಟ್ಟಿಗೆ ಕಳೆದವಳು. ಹಿರಿಯರ ಮನಸ್ತಾಪ ನಮ್ಮನು ಬೇರೆ ಮಾಡಿತ್ತು. ಅಲ್ಲಿಂದ ನಮ್ಮ ನಂಟು ಕಳಚಿಹೋಗಿತ್ತು. ಅವರ ಕುಟುಂಬ ದೂರ ಹೊರಟು ಹೋಗಿತ್ತು. ಈಗ ನನಗೆ ನಿದಿ ಸಿಕ್ಕಂತಾಗಿತ್ತು.  ಎಲ್ಲಾ ನೆನಪು ಮನದಲ್ಲಿ ಹಾಯ್ದು ಹೋಯಿತು. ಅಷ್ಟರಲ್ಲೇ ನನ್ನ ಬಸ್ ಬಂದಿತ್ತು. ಈ ಬಸ್ ಬಿಟ್ಟರೆ ಬೇರೆ ಬಸ್ ಇರಲಿಲ್ಲ. ಅವಳನ್ನು ಬಿಟ್ಟು ಹೋಗುವ ಮನಸ್ಸು ಇರಲಿಲ್ಲ, ಏನು ಮಾಡುವುದೆಂದು ತಿಳಿಯಲಿಲ್ಲ. 'ನೀನು ಎಲ್ಲಿಗೆ ಹೋಗ್ತಾ ಇದೀಯಾ? ಎಂದು ಕೇಳಿದೆ. ಅವಳು ಕಾರವಾರಕ್ಕೆ ಹೋಗ್ತಿದ್ದೀನಿ ನನ್ನ ಫ್ರೆಂಡ್ ಕಾವ್ಯ ಅಂತಿದಾಳೆ, ಅವಳ ಎಂಗೆಜಮೆಂಟ್ ತುಂಬಾ ಫೋರ್ಸ್ ಮಾಡಿದ್ಲು ಅದ್ಕೆ ಹೋಗ್ತಿದೀನಿ ಎಂದಳು. 
 
        ಕಾವ್ಯ ನನ್ನ ಫ್ರೆಂಡ್ ಕಿರಣ್ ನ ತಂಗಿ ಒಹ್ ಎಂತ ಸುಯೋಗ ಎಂದುಕೊಂಡು ಇದನ್ನೇ ಅವಳಿಗೂ ಹೇಳಿದೆ ಇಬ್ಬರು ಬಸ್ ಹತ್ತಿ ಅಕ್ಕ ಪಕ್ಕ ಕುಳಿತು ಹರಟಿದೆವು. ಕಾರವಾರ ತಲುಪುವವರೆಗೂ, ನಮ್ಮ ಬಾಲ್ಯವನ್ನು ಮಗುಚಿ ಹಾಕಿದೆವು. ಇಷ್ಟು ದಿನದ ವಿರಹವನ್ನು ಕಣ್ಣಲ್ಲೇ ವಿನಿಮಯ ಮಾಡಿಕೊಂಡೆವು. 'ನಾನು 'ಅನಿ' ಅಂತ ಹೇಗೆ ಗೊತ್ತಾಯಿತು' ಅಂತ ಕೇಳಿದೆ?  ಅದಕ್ಕೆ 'ಮೊನ್ನೆ ತರಂಗದಲ್ಲಿ ನಿನ್ನ ಕವನ ನಿನ್ನ ಫೋಟೋದೊಂದಿಗೆ ಪ್ರಕಟವಾಗಿತ್ತು. ಅದಕ್ಕೆ ಮಾಹಿತಿ ಕೋರಿ ತರಂಗ ಕಚೇರಿಗೆ ಫೋನ್ ಮಾಡಿ ನಿನ್ನ ಬಗ್ಗೆ ತಿಳಿದುಕೊಂಡೆ ಅವರು ಕೊಟ್ಟ ಮಾಹಿತಿಯಿಂದ ನೀನೆ ನನ್ನ "ಅನಿ" ಅಂತ ಗೊತ್ತಾಯಿತು. ಆದರೆ ನಿನ್ನ ಇಷ್ಟು ಬೇಗ ಬೇಟಿ ಆಗ್ತೀನಿ ಅಂದುಕೊಂಡಿರಲಿಲ್ಲ ' ಎಂದಳು.
 
                ನೀನೆ ನನ್ನ "ಅನಿ" ಎಂಬ ಮಾತು ನನಗೆ ರೋಮಾಂಚನ ಮೂಡಿಸಿತು. " ನಾನು ನಿನ್ನ ಎಷ್ಟು ಮಿಸ್ ಮಾಡ್ಕೊಂಡಿದ್ದೆ ಇಷ್ಟು ದಿನ, ಗೊತ್ತಾ ಸೋನು? ಈಗ ನೀನು ಸಿಕ್ಕಿದ್ದು ನನ್ನ ಅದೃಷ್ಟ 'ಆಯ್ ಲವ್ ಯು ಸೋನು', " ಎಂದು ನನಗರಿವಿಲ್ಲದೆ ಹೇಳಿಬಿಟ್ಟಿದ್ದೆ. ನಂತರ ಸೋನು ಒಂದು ಮಾತನಾಡಲಿಲ್ಲ. ಕಿಟಕಿಯಿಂದ ಸುರಿಯುವ ಮಳೆಯನ್ನು ನೋಡುತ್ತಾ ಏನೋ ಯೋಚಿಸುತ್ತಿದ್ದಳು. ನನಗೆ ತುಂಬಾ ಬೇಜಾರಾಯಿತು. ನಾನು ಆತುರ ಪಟ್ಟೆ ಅನಿಸಿತು. 
         ನಾನು ಇನ್ನೊಮ್ಮೆ ಹೇಳಿದೆ, ಈ ಸೋನೆ ಮಳೆಯ ಆಣೆ ಕಣೆ ನಾನು ನಿನ್ನ ಇಷ್ಟ ಪಡ್ತೀನಿ, ತುಂಬಾ ಪ್ರೀತಿಸ್ತೀನಿ, ನೀನಿಲ್ಲದ ನಾನು ನೀರಿಲ್ಲದ ಮೀನು  ಎಂದೆ ಎಮೋಶ್ನಲ್ ಆಗಿ, "ನಂಗು ನೀನಂದ್ರೆ ಇಷ್ಟ ಆದ್ರೆ ಇದೆಲ್ಲಾ ಸಾಧ್ಯನ? ಸ್ವಲ್ಪ ಯೋಚಿಸು ನಮ್ಮ ಅಮ್ಮ ಒಪ್ಪಿದರು ನಿಮ್ಮ ಮನೆಯಲ್ಲ್ಲಿ ಒಪ್ಪಲ್ಲ. ಮೊದಲೇ ನಮ್ಮನು ಕಂಡರೆ ಆಗಲ್ಲ ಅದನ್ನೇ ಯೋಚಿಸುತಿದ್ದೆ '' ಅಂದಳು.
 
      " ನಾವು ಅವರನ್ನು ಒಪ್ಪಿಸೋಣ ದ್ವೇಷದ ಜಗದಲ್ಲಿ ಪ್ರೀತಿ ಮೂಡಿಸೋಣ, ಯಾರೆನೆಂದರೂ ಸರಿ ನಾನಂತು ನಿನ್ನೆ ಮದುವೆಯಾಗೋದು ಇನ್ನೆರಡು ವರ್ಷ M.Sc ಮುಗಿಸಿ ಜಾಬ್ ಮಾಡ್ತೀನಿ ಅಲ್ಲಿವರೆಗೆ ನೀನು ನಿನ್ನ ಓದು ಮುಗಿಸು ಕಡಮೆ ಅಂದ್ರು 3 ರಿಂದ 4 ವರ್ಷ ಟೈಮ್ ಇದೆ " ಎಂದೆ. ಓಕೆ ಆದ್ರೆ ಭಯ ಆಗತ್ತೆ ಎಂದು ನಾಚಿಕೆ ಮಿಶ್ರಿತ ಭಯದಿಂದ ನನ್ನೆದೆಗೊರಗಿದಳು. ನಮ್ಮ ಪ್ರೀತಿಗೆ ಸ್ವರ್ಗ ಲೋಕವೇ ಅಸ್ತು ಎಂದು ಧಾರಾಕಾರ ಮಳೆ ಸುರಿಸಿ ಆಶಿರ್ವದಿಸಿತ್ತು 
 
            " ರೀ ರೀ ಏನ್ ಯೋಚಿಸ್ತಿದಿರಾ? '' ಎಂಬ ಸೌಮ್ಯಳ ದ್ವನಿ ಕೇಳಿ, ವಾಸ್ತವಕ್ಕೆ ಬಂದೆ. ಏನಿಲ್ಲಾ ಸೋನು ನೀನು ಧಾರವಾಡದಲ್ಲಿ ಬೇಟಿಯಾದ  ಸನ್ನಿವೇಶ ನೆನಸಿಕೊಳ್ಳುತಿದ್ದೆ, ಎಂದು ನಕ್ಕೆ. "ಸರಿ ಆಮೇಲೆ ನಿದಾನವಾಗಿ ನೆನೆಸಿಕೊಳ್ಳುವಿರಂತೆ, ಅಮ್ಮ ಬಸ್ ಸ್ಟ್ಯಾಂಡ್ ಗೆ ಬಂದಾಯ್ತು ಕರೆದುಕೊಂಡು ಬನ್ನಿ" ಎಂದು ನಗುತ್ತಾ ಅಡಿಗೆ ಮನೆಗೆ ಹೋದಳು. ನಮ್ಮ ಮದುವೆಯಾಗಿ ವರ್ಷವಾಗಿದೆ. ಹಿರಿಯರನ್ನು ಒಪ್ಪಿಸಿ, ಅವರ ದ್ವೇಷಕ್ಕೆ ತೆರೆ ಎಳೆದು ನನ್ನ ಸೋನುವನ್ನು ನನ್ನವಳನ್ನಾಗಿ ಮಾಡಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೆ. 
 
                 "ರೀ ಹೊರಟ್ರಾ..." ಎಂಬ ಮಾತು ಕೇಳಿ ಬಂತು. "ಹಾಂ ಹೊರಟೆ" ಎನ್ನುತ್ತಾ ಕಾರ್ ಚಲಾಯಿಸಿದೆ.