Saturday 24 September 2011

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "

    










  ಎಷ್ಟೇ ಬೇಡವೆಂದರೂ ಒತ್ತಿಕೊಂಡು ಬರುವ ನೆನಪಿನ ಮಹಾಪುರವನ್ನು ತಡೆಯಲು ಸಾದ್ಯವೇ? ಹಾಗೆ ಬಂದ ಮಹಾಪುರದಲ್ಲಿ ಒಂದು ಬಿಂದಿಗೆಯಷ್ಟು ನೆನಪನ್ನು ನಿಮ್ಮ ಮುಂದೆ ಸುರಿಯುವ ಚಿಕ್ಕ ಪ್ರಯತ್ನ....
 
                  ಕಾಲೇಜಿಗೆ ಹೋಗಬೇಕೆಂಬ ಮಹದಾಸೆ ಹೊಂದಿದ್ದ ನೆತ್ರಕ್ಕನ ಕನಸಿಗೆ ಅವಳಪ್ಪ ತಣ್ಣಿರೆರೆಚಿದ್ದ ಟೈಲರಿಂಗ್ ಕ್ಲಾಸಿಗೆ ಸೇರಿಸಿದ್ದ. ಪಾಲಿಗೆ ಬಂದ್ದದ್ದು ಪಂಚಾಮೃತ ಎಂದುಕೊಂಡು ನೋವನ್ನು ನುಂಗಿಕೊಂಡಿದ್ದಳು. ನಾನು ಅವಳಿಗಿಂತ 2 ವರ್ಷ ಚಿಕ್ಕವಳು. ನನಗಿಂತ ದೊಡ್ಡವಳಾದರೂ, ನನ್ನ ಅತ್ಮಿಯ ಗೆಳತಿಯರ ಸಾಲಿಗೆ ಸೇರಿದ್ದಳು. 
                     
                 ನಮ್ಮ ಸ್ನೇಹಕ್ಕೆ ವಯಸ್ಸಿನ ಅಂತರ ಇರಲಿಲ್ಲ. ಹಾಗೆ 2  ವರ್ಷ ಕಳೆದು ಹೋಯಿತು. ನಾನು  ಕಾಲೇಜಿಗೆ ಹೋಗತೊಡಗಿದ್ದೆ. ವಾರಕ್ಕೊಮ್ಮೆ ಮನೆಗೆ ಬಂದಾಗ ತಪ್ಪದೆ ಅವಳನ್ನು ಬೇಟಿಯಾಗಿ ಎಲ್ಲಾ ಘಟನೆಗಳನ್ನು ವಿವರಿಸುತಿದ್ದೆ. ಅದನ್ನು ಕೇಳಿ ಕಾಲೇಜು ಜೀವನದ ಬಗ್ಗೆ ತಿಳಿದು ಕೊಳ್ಳುತ್ತಿದ್ದಳು. ಯಾವುದೇ ಹೊಸ ವಸ್ತು ಖರೀದಿಸಲಿ, ನನಗೆ ತೋರಿಸಿದೆ, ನನ್ನ ಮೆಚ್ಚುಗೆ ಪಡಿಯದೆ, ಉಪಯೋಗಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಾವಿಬ್ಬರು ಹಚ್ಚಿಕೊಂಡಿದ್ದೆವು. 
 
                 ಅದೊಂದು "ಕರಾಳ ದಿನ" ಬರದಿದ್ದರೆ,........    ನೆನಸಿಕೊಳ್ಳಲು ಭಯವಾಗತ್ತೆ....
          ಹೌದು ಅದೊಂದು ಭಯಂಕರ ದಿನ ನಮ್ಮೆಲ್ಲರ ಪಾಲಿಗೆ, ನಾನಾಗ 2  sem ಡಿಗ್ರಿಯಲ್ಲಿದ್ದೆ ರಜೆಯ ನಿಮ್ಮಿತ್ತ ಮನೆಗೆ ಬಂದಿದ್ದೆ, ನನ್ನ ಪಿ ಯು ಸಿ ಗೆಳೆತಿಯೊಬ್ಬಳು ತುಂಬಾ ದಿನದಿಂದ ಅವಳ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದಳು ಸರಿಯೆಂದು ಅವಳ ಮನೆಗೆ ಹೋಗಲು ಸಿದ್ದಳಾಗಿದ್ದೆ. ಹೋಗುವ ಮೊದಲನೇ ದಿನ ಸಾಯಂಕಾಲ ನನ್ನ ಮತ್ತು ನೆತ್ರಕ್ಕನ ಮಾಮೂಲಿ ಜಾಗದಲ್ಲಿ ಬೇಟಿಯಾಗಿ ಗೆಳತಿಯ ಮನೆಗೆ ಹೋಗುವುದಾಗಿ ಹೇಳಿದ್ದೆ. ಹೋಗಿ ಬೇಗ ಹಿಂತಿರುಗಿ ಬಾ ಎಂದಿದ್ದಳು. 
 
                     ನಾನು ನನ್ನ ಗೆಳತಿಯ ಮನೆಗೆ ಹೋಗಿ ಅವಾಗಾಗಲೇ 2  ದಿನವಾಗಿತ್ತು. 3 ನೇ ದಿನ ಪೇಪರ್ ನೋಡಿದಾಗ ಆಘಾತವಾಗಿತ್ತು. ನನ್ನ ಆಪ್ತ ಸ್ನೇಹಿತೆ  ನೆತ್ರಕಳ ದುರ್ಮರಣ ಸುದ್ದಿ ಅವಳ ಫೋಟೋದೊಂದಿಗೆ ಪ್ರಕಟವಾಗಿತ್ತು ನನ್ನ ಗೆಳತಿಯ ಮನೆಯ ಲ್ಯಾಂಡ್ ಲೈನ್ ಫೋನ್ ಹಾಳಗಿತ್ತು ಅದ್ದರಿಂದ ನನಗೆ ವಿಷಯ ತಿಳಿದಿರಲಿಲ್ಲ.ಹೇಗೋ ಆ ಕ್ಷಣ ನಾನು ಮನೆಗೆ ಹೊರಟು ಬಂದೆ ಆದರೆ ಆ ಹೊತ್ತಿಗಾಗಲೇ ಅವಳು ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋಗಿದ್ದಳು. 
 
         ಅಣ್ಣನ ಜೊತೆ ಗಣೇಶ ಹಬ್ಬಕ್ಕೆಂದು  ಹೊಸ ಬಟ್ಟೆ ತರಲೆಂದು ಹೋಗಿದ್ದವಳು ತಿರುಗಿ ಬಂದದ್ದು ನಿರ್ಜೀವವಾಗಿ. ದಾರಿಯಲ್ಲಿ ಕಬ್ಬಿಣದ  ಅದಿರು ಸಾಗಿಸುವ ಟ್ರಕ್ ಇವಳಣ್ಣನ ಬೈಕಿಗೆ ಡಿಕ್ಕಿ ಹೊಡೆದಿತ್ತು.  ಆ ರಭಸಕ್ಕೆ ಹಿಂದೆ ಕುಳಿತ ಇವಳು ಹಾರಿ ಬಿದ್ದಾಗ ಇವಳ ಗರ್ಭಕೋಶ ಒಡೆದು ಅತಿ ರಕ್ತ ಸ್ರಾವದಿಂದ ನರಳಿ ಆಸ್ಪತ್ರೆಗೆ ಸಾಗಿಸುವ ಸಾವನ್ನಪ್ಪಿದ್ದಳು. ಇದಾಗಿ ಇಂದಿಗೆ 4 ವರ್ಷಗಳೇ ಕಳೆದವು. ಗಣೇಶ ಹಬ್ಬ ಎಂದ ಕೂಡಲೇ ನಮ್ಮೆಲ್ಲರಿಂದ ದೂರವಾದ ಈ ಸ್ನೇಹಿತೆಯ ನೆನಪು ಹೃದಯ ಹಿಂಡುತ್ತದೆ. ನಿನ್ನ ಸ್ನೇಹಕ್ಕೆ ನಾನು ಚಿರಋಣಿ ಗೆಳತಿ.......
  

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "